ರಾಮಯ್ಯ, ಎಂ ಎಸ್
	(1922-2002). ಕರ್ನಾಟಕದ ತಬಲ ಮತ್ತು ಮೃದಂಗ ವಿದ್ವಾಂಸರು. ತಾಯಿಯ ಮಡಿಲಲ್ಲಿ ಇದ್ದಾಗಲೇ ಮೃದಂಗದ ನಾದಲಯ ತರಂಗಗಳನ್ನು ಆಲಿಸುತ್ತಾ ಬೆಳೆದವರು. ಹುಟ್ಟಿದ್ದು ಮೈಸೂರಿನಲ್ಲಿ 24-05-1922ರಲ್ಲಿ. ತಂದೆ ತಬಲ ವಿದ್ವಾಂಸ ಸುಬ್ಬಣ್ಣ. ರಾಮಯ್ಯನವರ ಕುಟುಂಬಪರಿವಾರದವರೆಲ್ಲಾ ನಾದೋಪಾಸಕರು. ತಾತ ಅನಂತಪ್ಪ ಅವರ ಕಾಲದಲ್ಲಿ ಗೌರವಾನ್ವಿತ ತಬಲವಾದಕರು. ಸಹೋದರರರಾದ ಎಂ.ಎಸ್. ಸುಬ್ರಹ್ಮಣ್ಯ ಪಿಟೀಲು ವಿದ್ವಾಂಸರು, ಆಕಾಶವಾಣಿ ನಿಲಯಕಲಾವಿದರಾಗಿದ್ದವರು. ವಿದ್ವಾನ್ ಎಂ.ಎಸ್. ಶೇಷಪ್ಪ ಡೋಲಕ್ ಮತ್ತು ಮೃದಂಗವಾದಕರೆಂದು ಖ್ಯಾತರಾಗಿದ್ದವರು. ರಾಮಯ್ಯನವರ ಮತ್ತೊಬ್ಬ ಸೋದರ ಕೂಡ ಪ್ರಖ್ಯಾತ ಮೃದಂಗ ವಿದ್ವಾಂಸರು. ತಂದೆ ಸುಬ್ಬಣ್ಣ ಮೊದಲ ಗುರು. ಅನಂತರ ಪ್ರಖ್ಯಾತ ವಿದ್ವಾಂಸರಾಗಿದ್ದ ಮುತ್ತುಸ್ವಾಮಿ ತೇವರ್ ಮತ್ತು ಅವರ ಮಕ್ಕಳಾದ ವೆಂಕಟೇಶ ತೇವರ್ ಅವರಲ್ಲಿ ಶಿಕ್ಷಣ ಮುಂದುವರೆಯಿತು. ವಿದ್ವಾನ್ ಪುಟ್ಟಾಚಾರ್ ಮತ್ತು ಶ್ರೀನಿವಾಸಲು ನಾಯ್ಡು ಅವರ ಸಾನಿಧ್ಯದಲ್ಲಿ ತಾಳಗಳ ವೈವಿಧ್ಯತೆಯನ್ನು ಮನದಟ್ಟು ಮಾಡಿಕೊಂಡರು. ಪಲ್ಲವಿ ಚಂದ್ರಪ್ಪನವರ ಮಾರ್ಗದರ್ಶನದಲ್ಲಿ ಪಲ್ಲವಿಯ ಮರ್ಮಗಳನ್ನೆಲ್ಲಾ ಗ್ರಹಿಸಿದರು. ಡಾ. ಬಿ. ದೇವೇಂದ್ರಪ್ಪ ಅವರಿಂದ ಗಾಯನ ವಾದನಗಳ ವಿರಾಟ್ ಸ್ವರೂಪದರ್ಶನ ಪಡೆದರು. ರಾಮಯ್ಯನವರ ಕಲಿಕೆಯ ದಾಹ ಇಷ್ಟಕ್ಕೆ ಇಂಗಲಿಲ್ಲ. ಹೊರನಾಡಿನಿಂದ ಬರುವ ನುರಿತ ಗಾಯಕ ವಾದಕರ ಕಛೇರಿಗಳಿಗೆ ತಪ್ಪದೆ ಹೋಗಿ, ಗಾಯನ ಶೈಲಿಯನ್ನು ತಾಳವಾದ್ಯಗಳ ನುಡಿಸಾಣಿಕೆಯ ವೈವಿಧ್ಯತೆಯನ್ನು ಗಮನವಿಟ್ಟು ಕೇಳುತ್ತಿದ್ದರು. ಉತ್ತಮಾಂಶಗಳನ್ನೆಲ್ಲ ತಮ್ಮ ವಾದನಕ್ರಮದಲ್ಲಿ ಅಳವಡಿಸಿಕೊಳ್ಳುತ್ತಿದ್ದರು. ಒಮ್ಮೆ ಬೆಂಗಳೂರಿನಲ್ಲಿ ಅಲತ್ತೂರು ಸಹೋದರರ ಕಛೇರಿ ಏರ್ಪಾಟಾಗಿತ್ತು. ಆ ಕಾರ್ಯಕ್ರಮದಲ್ಲಿ ಘನ ವಿದ್ವಾಂಸ ಸುಬ್ರಹ್ಮಣ್ಯ ಪಿಳ್ಳೆ ಅವರ ಮೃದಂಗವಾದನವಿತ್ತು. ಅದನ್ನು ಕೇಳಲೆಂದೇ ರಾಮಯ್ಯನವರು 4 ಗಂಟೆಗಳ ಕಾಲ ರೈಲಿನ ಪ್ರಯಾಣ ಮಾಡಿ ಕಛೇರಿ ನಡೆಯುವ ಸ್ಥಳಕ್ಕೆ ಬರುವ ಹೊತ್ತಿಗೆ ಸಭಾಂಗಣ ತುಂಬಿ ತುಳುಕುತ್ತಿತ್ತು. ಕಡೆಗೆ ಕಾವಲುಗಾರನಿಗೆ ಕೈ ಬಿಸಿಮಾಡಿ ಒಳಕ್ಕೆ ಹೋಗುವ ವೇಳೆಗೆ, ತನಿ ಆವರ್ತನ ಆರಂಭವಾಗಿತ್ತು. `ಪಳನಿಯವರ ನುಡಿಸಾಣಿಕೆ, ಅದ್ಭುತ, ಅದೊಂದು ರೋಮಾಂಚಕ ಅನುಭವ ಎಂದು ರಾಮಯ್ಯನವರು ಅಂದಿನ ಕಛೇರಿ ಬಗೆಗೆ ಆಗಾಗ ಪ್ರಸ್ತಾಪ ಮಾಡುತ್ತಿದ್ದರು.

ಡಾ. ಗೋಪಾಲಸ್ವಾಮಿ ಮೈಸೂರಿನಲ್ಲಿ ಆರಂಭಿಸಿದ ಆಕಾಶವಾಣಿಯಲ್ಲಿ ನಿಲಯ ಕಲಾವಿದರಾಗಿ ಸೇರಿದರು. ಆಕಾಶವಾಣಿ ಕೇಂದ್ರ ಸರಕಾರಕ್ಕೆ ಸೇರಿದ ಮೇಲೆ ಅಲ್ಲಿಯೇ ಮುಂದುವರೆದರು. ಆಕಾಶವಾಣಿ ನಿಲಯಕ್ಕೆ ಬಂದ ಹಿರಿಯ ವಿದ್ವಾಂಸರಾದ ಅಲತ್ತೂರು ಸಹೋದರರು. ಪಲ್ಲಡಂ ಸಂಜೀವರಾವ್, ಟೈಗರ್ ವರದಾಚಾರ್ ಗುರುಗಳಾದ ಬಿ.ದೇವೇಂದ್ರಪ್ಪ, ಮೊದಲಾದ ಕಲಾವಿದರಿಗೆ ಪಕ್ಕವಾದ್ಯ ನುಡಿಸಿದ್ದಾರೆ. ಡಿ.ಕೆ.ಪಟ್ಟಮ್ಮಾಳ್, ಬಾಲಮುರಳೀಕೃಷ್ಣ, ವೇಣುವಾದಕ ಮಾಲಿ, ಇವರೇ ಮೊದಲಾದ ಕಲಾವಿದರ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ರಾಮಯ್ಯನವರು ಮೃದಂಗ ಸಹಕಾರ ನೀಡಿದ್ದಾರೆ. ಭೀಮಸೇನ ಜೋಷಿ ಮೊದಲಾದ ಹಿಂದುಸ್ಥಾನಿ ಗಾಯಕರಿಗೆ ತಬಲಾ ಸಾಥ್ ನೀಡಿ ಮೆಚ್ಚುಗೆ ಪಡೆದಿದ್ದಾರೆ.

ಹಿರಿಯ ವಿದ್ವಾಂಸರಾದ ಮುತ್ತಯ್ಯಭಾಗವತರು ತಮ್ಮ ಬಾಲ್ಯದ ದಿನಗಳಲ್ಲಿ ನೀಡುತ್ತಿದ್ದ ಪ್ರೋತ್ಸಾಹವನ್ನು ಸ್ಮರಿಸಿಕೊಂಡು, ಕಿರಿಯ ಕಲಾವಿದರ ವಿಚಾರದಲ್ಲಿ ಆತ್ಮೀಯವಾಗಿ ನಡೆದುಕೊಂಡಿದ್ದಾರೆ. 
	ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಅವರ ಮನೆಗಳಲ್ಲಿ ಬಿಡಾರಂ ಕೃಷ್ಣಪ್ಪನವರ ರಾಮಮಂದಿರದಲ್ಲಿ ನಡೆಯುತ್ತಿದ್ದ ರಾಮೋತ್ಸವ ಕಛೇರಿಗಳಲ್ಲಿ, ದೇವೇಂದ್ರಪ್ಪನವರ ಹನುಮಜ್ಜಯಂತಿ ಉತ್ಸವಗಳಲ್ಲಿ ನಡೆಯುತ್ತಿದ್ದ ಕಛೇರಿಗಳಲ್ಲೂ ಭಾಗವಹಿಸಿದ ನಾಡಿನ ಹಿರಿಯ ಕಲಾವಿದರಿಗೆಲ್ಲಾ ಮೃದಂಗ ವಾದನದ ಸಹಕಾರ ನೀಡಿದ್ದಾರೆ.

	ರಾಮಯ್ಯನವರು ನಿಗರ್ವಿ, ಹಿರಿಯರು ಕಿರಿಯರೆಂದು ಭೇದವೆಣಿಸದೆ ಎಲ್ಲರೊಡನೆ ಬೆರೆತು, ಅವರ ಗಾಯನ, ವಾದನ ಕಾರ್ಯಕ್ರಮಗಳಿಗೆ ಮನಃಪೂರ್ವಕ ಸಹಕಾರ ನೀಡುವ ಈ ನಡವಳಿಕೆಯಿಂದಾಗಿ, ಅವರು ಸರ್ವ ಜನಪ್ರಿಯ ಕಲಾವಿದರಾಗಿದ್ದರು. 

	ರಾಮಯ್ಯನವರಿಗೆ ಸಂದಿರುವ ಪ್ರಶಸ್ತಿ, ಸನ್ಮಾನಗಳು ಅನೇಕ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ (1982-83), ಬೆಂಗಳೂರು ಗಾಯನ ಸಮಾಜದ ಸಂಗೀತ ಕಲಾರತ್ನ ಸನ್ಮಾನ (1991), ಕರ್ನಾಟಕ ಸರಕಾರದ ಪ್ರತಿಷ್ಠಿತ `ಕನಕ ಪುರಂದರ ಪ್ರಶಸ್ತಿ (1998)-ಇವು ಕೆಲವು ಗಣನೀಯ ಪ್ರಶಸ್ತಿಗಳು. ಈ ಸಜ್ಜನ ಕಲಾವಿದ ನವೆಂಬರ್ 30, 2002ರಂದು ವಿಧಿವಶರಾದರು.								
(ಎಂ.ಬಿ.ಎಸ್)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ